ಶನಿವಾರ, ಮೇ 29, 2010

ದೆವ್ವ ಬಂದಾಗ !!

ದೆವ್ವ!
ಹೇಗೆ ಜಗತ್ತಿನ ಪ್ರತಿಯೊಬ್ಬರೂ ದೇವರ ಬಗ್ಗೆ , ಜೀವನದ ಬಗ್ಗೆ , ಕಡೆಗೆ ಪ್ರೀತಿಯಬಗ್ಗೆಯೂ "ಇರಲಿ ನನ್ನದೊಂದು" ಅನ್ನುವ ಹಾಗೆ ಅಭಿಪ್ರಾಯ ಇಟ್ಟುಕೊಂಡಿರುತ್ತಾರೋ ಹಾಗೆಯೆ ದೆವ್ವ ಭೂತಗಳ ಬಗ್ಗೆಯೂ ಇಟ್ಟುಕೊಂಡಿರುತ್ತಾರೆ.

ಭಾರತದಲ್ಲಿ ದೇವರು ದೆವ್ವಗಳ ಬಗ್ಗೆ ಜನರು ಸ್ವತಹ ಆ ದೇವರು ದೆವ್ವಗಳಿಗೆ  ಬೇಜಾರಗೋವಷ್ಟು ಮಾತಾಡುತ್ತಾರೆ, ಚರ್ಚಿಸುತ್ತಾರೆ ಮತ್ತು ಅದು ಕೊಡುವ ಭರವಸೆ, ಭಯದಲ್ಲಿಯೇ ಜೀವಿಸುತ್ತಾರೆ. ಆ ಭರವಸೆ, ಭಯಗಳ ನಡುವೆಯೂ ನಮ್ಮಂತವರಿಗೆ ಅದರೆಡೆಗೆ ಎಂದೆಂದಿಗೂ ಬತ್ತದ ಒಂದು ವಿಸ್ಮಯ, ಬೆರಗು ಅಥವಾ ಒಂದು ನಿರ್ಲಕ್ಷ್ಯವಿರುತ್ತದೆ. ಏಕೆಂದರೆ ಭಹುಷಹ ಭಾರತದಲ್ಲಿ ಜನರು ಕೋರ್ಟು,ಸರಕಾರ,  ಕಾನೂನಿದಕ್ಕಿಂತಾ, ಯಾಕೆ ಸ್ವತಹ ತಮಗಿಂತಾ  ಹೆಚ್ಚಾಗಿ ದೇವರು, ದೆವ್ವಗಳ  ಮೇಲೆ ನಂಬಿಕೆ ಇಟ್ಟುಕೊಂಡಿರುತ್ತಾರೆ!

ನಮಗೂ ಎಸ್ಟೋ ಸಲ ಎಷ್ಟೇ ಧೈರ್ಯವಂತರಾದರೂ, ಕಡು ಕತ್ತಲ ರಾತ್ರಿಗಳಲ್ಲಿ ಒಬ್ಬರೇ ಹೋಗುತ್ತಿರುವಾಗ ಯಾರೋ ನಮ್ಮನ್ನು ಹಿಂಬಾಲಿಸುತ್ತಿರುವ ಕಲ್ಪನೆಯೊಂದು ಮೂಡಿ ನಾವು ಎಷ್ಟೇ ಪ್ರಯತ್ನ ಪಟ್ಟರೂ ಬೆನ್ನಿನಾಳದಿಂದ ಸಣ್ಣದೊಂದು ನಡುಕ ಶುರುವಾಗಿ ಮೈಯೆಲ್ಲಾ ಹಬ್ಬುತ್ತದೆ. ಅಲ್ಲಿ ಏನು ಇರದಿದ್ದರೂ ಅಕಸ್ಮಾತ್ ಏನಾದರೋ ಇದ್ದೀತೇನೋ ಎಂಬ ಆತಂಕ ನಮ್ಮನ್ನು ಆವರಿಸಿಕೊಳ್ಳುತ್ತದೆ.

ನಮ್ಮ ಮನಸ್ಸಿನೊಳಗೆ ಅದರ ಪಾಡಿಗೆ ಅದು ಮಲಗಿಕೊಂಡಿರುವ  ದೆವ್ವವನ್ನು ನಾವೇ ತಟ್ಟಿ ಎಬ್ಬಿಸಿ ಆಚೆ ಕರೆದು, ಅದಕ್ಕಿಂತಾ ಭಯಾನಕವಾಗಿ ನಾವಿದ್ದರೂ, ನಾವು ಅದನ್ನು ನೋಡಿ ಹೆದರುತ್ತೇವೆ!.

ಅವತ್ತಗಿದ್ದೂ ಅದೇ.., ನಮ್ಮ ಮನೆಯಲ್ಲಿ ನಮ್ಮ ಅಜ್ಜಿಯೋ ಯಾರೋ ತೀರಿಕೊಂಡ ದಿನವಿರಬೇಕು.
 ನಾವು ಹುಡುಗರು( ಹುಡುಗಿಯರೂ!) ಸುಮಾರು 16 ಜನ cousins, ಊಟವಾದ ಮೇಲೆ ಮಾಡಲು ಬೇರೇನೂ ಕೆಲಸವಿಲ್ಲದರಿಂದ ದೆವ್ವದ ಬಗ್ಗೆ ಮಾತಾಡುತ್ತಾ ಆಡುತ್ತಾ, ಹೆದರಿ, ಬೆದರಿ ಸರಿಯಾಗಿ ನಿದ್ದೆಯೂ ಬಾರದ ಅವಸ್ತೆ ಮಾಡಿಕೊಂಡು ಸುಮ್ಮನೆ ಮುಸುಕೆಳೆದುಕೊಂಡು ಬಿದ್ದುಕೊಂಡಿದ್ದೆವು.
 ರಾತ್ರಿ ಎಷ್ಟು ಹೊತ್ತಿಗೋ ಯಾರೋ ನಿದ್ರೆಯಲ್ಲಿದ್ದ ನನ್ನನ್ನ ತಟ್ಟುತಿರುವಂತೆ ಭಾಸವಾಯಿತು. ತಕ್ಷಣ ಎಚ್ಚರಗೊಂಡ ನಾನು ರಾತ್ರೆ ನಾವಾಡಿದ ಮಾತೆಲ್ಲ ಜ್ಞಾಪಕಬಂದು, ನನ್ನ ಮಾತು ಕೇಳಿಸಿಕೊಂಡ ಯಾವುದೋ ಕೆಲಸವಿಲ್ಲದ ದೆವ್ವ ನನ್ನನ್ನು ಹುಡುಕಿಕೊಂಡು ಇಲ್ಲಿಯತನಕ ಬಂದುಬಿಟ್ಟಿದೆ ಅಂದುಕೊಂಡೆ!  ಮನೆಮುಂದಿರುವ ತುಳಸಿಯನ್ನು ದಾಟಿಕೊಂಡು ಬಂದಿರುವ (ಆಗ ನಮಗೆ ತುಳಸಿ ಇದ್ದರೆ ಅದು ಬರುವುದಿಲ್ಲವೆಂಬ ನಂಬಿಕೆ ಇತ್ತು!) ಇದು ಯಾವುದೋ ಒಂದು ಧೈರ್ಯವಂತ ದೆವ್ವವೇ ಇರಬೇಕೆಂದುಕೊಂಡು, ತಕ್ಷಣಕ್ಕೆ ಮನಸ್ಸಿಗೆ ಬಂದ ದೇವರ ಹೆಸರನ್ನೆಲ್ಲ ಹೇಳಿಕೊಂಡು ಪ್ರಾರ್ಥಿಸುವುದಕ್ಕೆ ಪ್ರಾರಂಭಿಸಿದೆ.
ಆದರೆ ಮತ್ತೆ ಯಾರೋ ನನ್ನ ಮುಸುಕೆಳೆದ ಹಾಗೆ, ನನ್ನ ಹೆಸರು ಕರೆದ ಹಾಗೆ ಆಯಿತು. ಆಗಲಂತೂ ದೇವರ ಹೆಸರು ಹೇಳಿದ ಮೇಲೂ ಹೀಗೆ ಆಗಿದ್ದರಿಂದ ಇದು ದೇವರಿಗೂ ಹೆದರದೆ ಇರೋ ಭಂಡ ದೆವ್ವವೆಂದುಕೊಂಡು, ಇನ್ನು  ನನ್ನ ಕೆಥೆ ಮುಗಿಯಿತೆಂದುಕೊಂಡು, ಅದು ನನ್ನನ್ನು ಸಾಯಿಸುವುದಕ್ಕಿಂತಾ ಮುಂಚೆ ಅದರ ಮುಖವನ್ನಾದರೂ ನೋಡೋಣವೆಂದು ಮುಸುಕು ತೆರೆದೆ.
ಸುಂದರವಾಗಿರುವ(?) ಒಂದು ಮೋಹಿನಿಯನ್ನು ನಿರೀಕ್ಷಿಸಿದ್ದ ನಾನು ಭಯಾನಕವಾದ ನನ್ನ ತಮ್ಮನ ಮುಖ ನೋಡಿ ಬೆಚ್ಚಿಬಿದ್ದೆ. ಎದ್ದು ನೋಡಿದರೆ ಇನ್ನೂ ಒಬ್ಬ ಎದ್ದು ಕುಳಿತ್ತಿದ್ದ. ಏನು ಅಂದೆ. ನನ್ನ ತಮ್ಮನಿಗೆ ರಾತ್ರಿ ಎಚ್ಚರವಾಗಿ ಸೂಸೂಗೆ ಹೋಗಲು ಒಬ್ಬನಿಗೇ ಭಯವಾಗಿ ತನ್ನ ಪಕ್ಕದಲ್ಲಿ ಮಲಗಿರುವ ನನ್ನ ಅಣ್ಣನನ್ನು ಎಬ್ಬಿಸಿಕೊಂಡು ಹೋಗಿ 'ಕೆಲಸ' ಮುಗಿಸಿಕೊಂಡು ಮಲಗಲು ಪ್ರಯತ್ನಿಸಿದರು. ಆದರೆ ನಿದ್ರೆ ಬರಲಿಲ್ಲ, ಅದಕ್ಕೆ ನನ್ನ ನಿದ್ರೆ ಕೆಡಿಸಿದ್ದರು. ಸರಿ ಮಾತಾಡುತ್ತ ಕುಳಿತೆವು. ಸುತ್ತ ಮುತ್ತ ನೋಡಿದೆ, ಅದೇ 16 ಜನ ಬಿಟ್ಟರೆ ಬೇರೆ ಯಾರೂ ದೊಡ್ಡವರಿರಲಿಲ್ಲ. ಹಾಗಾಗಿ ಎಲ್ಲರನ್ನು ಎಬ್ಬಿಸಿಬಿಟ್ಟೆವು. ಮತ್ತೆ ನಮ್ಮ ಚರ್ಚೆಗೆ ಎಳೆದುತಂದಿದ್ದು ಅದೇ ದೆವ್ವವನ್ನ. ಅದೆಷ್ಟೋ ಹೊತ್ತು ಹಾಗೆ ಮಾತಾಡುತ್ತಾ ಕುಳಿತಿದ್ದೆವು. ಗೋಡೆಯ ಮೇಲೆ ಹೊರಗಿನ ಯಾವುದೋ ನೆರಳು ಓಡಾಡುತ್ತಿರುವಂತೆ ಭಾಸವಾಗಿ ಹೆದರಿಕೊಂಡೆ. ಆದರೆ ಸುಮ್ಮನೆ ಯಾಕೆ ಸಂಶಯ ಪಡಬೇಕೆಂದು ಎದ್ದು ಹೋಗಿ ಕಿಟಕಿಯಿಂದ ಇಣುಕಿ ನೋಡಿದೆ-

ನಕ್ಷತ್ರಗಳಿಂದ ತುಂಬಿ ತುಳುಕುತ್ತಿದ್ದ ಕಪ್ಪು ಆಕಾಶದಲ್ಲಿ ದ್ರುಷ್ಟಿಬೊಟ್ಟಿಟ್ಟಂತೆ ಪೂರ್ಣಚಂದ್ರ ಒಬ್ಬನೇ ನಗುತ್ತಾ ನಿಂತಿದ್ದ.

ಮತ್ತೆ ಬಂದು ಕುಳಿತೆ. ದೆವ್ವ ಬರೀ ಕಲ್ಪನೆ ಅನಿಸ್ತು.
ಅದನ್ನೇ ನನ್ನ ಅಣ್ಣನಿಗೆ ಹೇಳಿದೆ.
ಅದಕ್ಕವನು ದೆವ್ವವಿರುವುದು ನಿಜವಾದರೆ ಇನ್ನು ಮೂರು ಎಣೆಸದರೊಳಗಾಗಿ ಮನೆಯ ಕಾಲಿಂಗ್ ಬೆಲ್ ಶಬ್ದವಾಗುತ್ತದೆ ಎಂದ.
ತಕ್ಷಣ ನನಗೆ ಹೆದರಿಕೆಯಾಯಿತು. ಇಷ್ಟು ನೇರವಾಗಿ ದೆವ್ವದಂತಾ ದೆವ್ವಕ್ಕೆ ಸವಾಲೆಸೆಯುವುದು ಮೂರ್ಖತನ ಕೆಲಸವೆನ್ನಿಸಿ ನಿನ್ನ ನಿರ್ಧಾರವನ್ನ ಪುನರ್ವಿಮರ್ಶೆ ಮಾಡಿಕೋ  ಎಂದು ನಮ್ಮಣ್ಣನನ್ನ ಕೇಳಿಕೊಳ್ಳೋಣವೆಂದುಕೊಳ್ಳುವಷ್ಟರಲ್ಲಿ ಅವನು ಎಣೆಸಲು ಶುರುಮಾಡಿಬಿಟ್ಟಿದ್ದ...
ಒಂದು...(ಏನೂ ಸಂಭವಿಸಲಿಲ್ಲ)
ಎರಡು...(ಏನೂ ಸಂಭವಿಸಲಿಲ್ಲ)
ಮೂರು...,
ಆಗ ಹೊಡೆದುಕೊಂಡಿತು ಕಾಲಿಂಗ್ ಬೆಲ್ಲು!
 ಒಂದಲ್ಲ ಎರಡೆರಡು ಸಾರಿ!
ತನ್ನ ಪಾಡಿಗೆ ತಾನು ಅಡ್ಡಾಡುತ್ತಿದ್ದ ದೆವ್ವವೊಂದ್ಯಾವುದೋ  ನಮ್ಮ ಸವಾಲಿಗೆ ಉತ್ತರವೆಂಬಂತೆ ಬಂದೇ ಬಿಟ್ಟಿತ್ತು!.
ಮರದ ಮೇಲೆ, ಜಗತ್ತಿನೆಡೆಗೆ ಒಂದು ನಿರ್ಲಕ್ಷ್ಯವಿಟ್ಟುಕೊಂಡು ಕೂತಿರುವ ಕಾಗೆಗಳ ಗುಂಪಿಗೆ ಅನಿರೀಕ್ಷಿತವಾಗಿ ಯಾರೋ ಗುಂಡು ಹೊಡೆದರೆ ಹೇಗೆ ಚೆಲ್ಲಪಿಲ್ಲಿಯಾಗುತ್ತವೋ , ನಾವೆಲ್ಲರೂ ಹಾಗೆಯೇ ಚೆಲ್ಲಾಪಿಲ್ಲಿಯಾಗಿ ಸಿಕ್ಕ ಹೊದಿಗೆಗಳ ಎಳೆದುಕೊಂಡು ಸಿಕ್ಕ ಕಡೆಗಳಲ್ಲಿ ಬಿದ್ದುಕೊಂಡೆವು.
ಬೆಳಗ್ಗೆ ಎದ್ದಾಗ 8 ಘಂಟೆ.
ಎದ್ದು ನಮ್ಮ ತಾತನ ಬಳಿ ಹೋಗಿ ರಾತ್ರಿ ನಡೆದ ಘಟನೆಯನ್ನು ಒಂದಕ್ಕೆರಡು ಮಾಡಿ, ಈ ಮನೆಯಲ್ಲಿ ದೆವ್ವದ ಕಾಟವಿದೆ ಎಂದು ಹೇಳಿದೆವು. ಅವರು ಸ್ವಲ್ಪವೂ ವಿಚಲಿತರಾಗದೆ ಹೇಳಿದರು- ಎರಡು ಸಲ ಕಾಲಿಂಗ್ ಬೆಲ್ಲು ಹೊಡೆಯುವುದು ಐದು ಘಂಟೆಗೆ , ಮತ್ತು ಹೊಡೆಯುವಾತ ಹಾಲಿನವನು!.