ಶನಿವಾರ, ಮಾರ್ಚ್ 13, 2010

"ಮಹಿಳಾ ದಿನಾಚರಣೆಗೆ ನಾನು ಬರೆದ ಭಾಷಣ"

 ಆಕಾಶ ನೀಲಿಯಲಿ,
ಚಂದ್ರ , ತಾರೆ ತೊಟ್ಟಿಲಲ್ಲಿ,
ಬೆಳಕಾ ಇಟ್ಟು ತೂಗಿದಾಕೆ...
ನಿನಗೆ ಬೇರೆ ಹೆಸರು ಬೇಕೇ?
ಸ್ತ್ರೀ ಎಂದರೆ ಅಷ್ಟೇ ಸಾಕೆ??

ಹೀಗೆ ಇಷ್ಟು ಸುಂದರವಾಗಿ, ಇಷ್ಟು ಭಾವುಕವಾಗಿ, ಇಷ್ಟು ಅರ್ಥಪೂರ್ಣವಾಗಿ ಬರೆದವರು ನಮ್ಮ ಹೆಮ್ಮೆಯ ಕವಿ ಡಾ.ಜಿ.ಎಸ್. ಶಿವರುದ್ರಪ್ಪನವರು.

"Sure GOD created man before women. But then you always make a rough draft before the final masterpiece"

ಹೆಣ್ಣನ್ನು ಅಮ್ಮ ಅನ್ನಬೇಕ? ತಾಯಿ? ಜನನಿ? ಗೆಳತಿ? ಅಥವಾ ಬರೀ ಸ್ತ್ರೀ ಎಂದರೆ ಅಷ್ಟೇ ಸಾಕ??
ಭಾರತದಲ್ಲಿ ಹೆಣ್ಣಿಗೆ ಪೂಜ್ಯ ಸ್ಥಾನವಿದೆ. ಇಲ್ಲಿ ಹೆಣ್ಣನು ದೇವರಿಗೆ ಹೊಲಿಸುತ್ತೇವೆ, ಮತ್ತು ಅಷ್ಟೇ ಕೆತ್ತದಾಗಿಯು ನೋಡಿಕೊಳ್ಳುತ್ತೇವೆ!

ಜಗತ್ತಿನ ಎಲ್ಲಾ ಕಡೆ, ಎಲ್ಲಾ ಕಾಲದಲ್ಲೂ, ಎಲ್ಲಾ ಧರ್ಮಗಳೂ ಕಾಲ ಸರಿದಂತೆ ವಿಕಾಸವಗುತ್ತಾ ಹೋಗುತ್ತಾ ಹಳೆಯ ಕೆಟ್ಟ ಆಚರಣೆಯನ್ನೆಲ್ಲಾ ಕಿತ್ತೊಗೆದು ಹೊಸ ಕಲ್ಪನೆಗಳನ್ನ, ಹೊಸ ಅಭಿರುಚಿಗಳನ್ನ ತರುತ್ತದೆ. ಹಾಗೆ ಭಾರತದಲ್ಲಾದ ಮಹತ್ವದ ಬದಲಾವಣೆಗಳಲ್ಲಿ ವಿಧವಾ  ಪುನರ್ವಿವಾಹವೂ ಒಂದು. ಇದರ ಬಗ್ಗೆ ನಮ್ಮ ಇನ್ನೊಬ್ಬ ಹೆಮ್ಮೆಯ ಲೇಖಕ ಎಸ್.ಎಲ್.ಭ್ಯರಪ್ಪನವರು ತಮ್ಮ ಜನಪ್ರಿಯ  ಕಾದಂಬರಿ "ವಂಶವೃಕ್ಷ" ದಲ್ಲಿ ತುಂಬಾ ಚೆನ್ನಾಗಿ ಬರೆದಿದ್ದಾರೆ. ಅವರು ಹೆಣ್ಣನ್ನು ಪ್ರಕೃತಿಗೆ ಹೋಲಿಸಿದ್ದಾರೆ!
ಅವರು ಹೀಗೆ ಬರೆದಿದ್ದಾರೆ-

 "ಹೆಣ್ಣು ಪ್ರಕೃತಿ!
ಪ್ರಕೃತಿ ವಿಧವೆಯೇ?

ಚಿರನೂತನಳೂ, ಚಿರಚೀತನಳೂ ಆದ ಪ್ರಕೃತಿಗೆ ಕೃತಕ ಧರ್ಮದ ಕಟ್ಟು ಹಾಕುವುದು ಅಧರ್ಮ.
ಹೆಂಗಸನ್ನು ಅನುಭವದಿಂದ ವಂಚಿತಳನ್ನಾಗಿ ಮಾಡುವುದಕ್ಕೆ ಸಹಸ್ರ ಅಡೆತಡೆಗಳಿವೆ. ಅವೆಲ್ಲವೂ ಮನುಷ್ಯನಿಂದ ಕೃತಕವಾಗಿ ನಿರ್ಮಿತವಾದವು. ಈ ಅಡೆತಡೆಗಳಿಗೆ ಎಷ್ಟೋ ಸಲ ಹೆಂಗಸಿನ ಮೂಲ ಶಕ್ತಿಯನ್ನು ಎದರಿಸುವ  ಶಕ್ತಿ ಇಲ್ಲ. ಆಗ ಅವು ಗಂಡಸಿನ ಮನಸ್ಸನ್ನು ಹಿಡಿದು ನೂರಾರು ಭಯಭೂತಗಳನ್ನು ಬಿತ್ತುತ್ತವೆ. ನಮ್ಮ ಕೆಲವು ಸ್ವರೂಪಗಳಿಗೆ ಮೈಲಿಗೆಯ ಆರೋಪ ಹೊರಿಸಿ ಹೆಂಗಸ್ಸನ್ನು ವಂಚಿಸುವ ಪ್ರಯತ್ನ ನಡೆದೇ ಇದೆ. ಗಂಡಸರು ಹೆಂಗಸರಿಗಿಂತಾ ಎಷ್ಟಾದರೂ ದುರ್ಬಲರು.

ಅವಳ ಮೂಲ ಗುಣವೇ ಚೀತನವಾದುದು. ಪ್ರಕೃತಿಯ ಮನ ತುಂಬುವ ವನಶ್ರೀ, ಕಣ್ಣನ್ನು ಸಂತೃಪ್ತಿಗೊಳಿಸುವ ಸುಂದರ ದೃಶ್ಯಗಳು, ಚರಾಚರ ಜೀವಿಗಳಿಗೆ ಅನ್ನವೀಯುವ ಅವಳ ವಿಶಾಲ ವಿಸ್ತಾರ, ಇವುಗಳಿಗೆ ಯಾವ ಧರ್ಮವೂ ವ್ಯಧವ್ಯದ ಸೋಂಕು ತಗುಲಿಸಬಾರದು.
ಎಂದಿಗೂ ನಾವು ಕೃತಕ ಅಡೆತಡೆಗಳನ್ನು ನಂಬಿ ಅವಳನ್ನು ವಿಮುಕ್ತಳನ್ನಾಗಿಸಬಾರದು.
ವಿಮುಖತೆ ಪ್ರಕೃತಿಯ ಗುಣವಲ್ಲ!

ಪ್ರಕೃತಿಯ ಅಂದರೆ ಹೆಣ್ಣಿನ ಮೂಲ ಗುಣವನ್ನು ಕೃತಕವಾಗಿ ತಡೆಹಿಡಿಯುವ ಧರ್ಮ, ನೀತಿ, ರಾಜಶಾಸನ, ಸಮಾಜ ನಿಯಮ, ಜನತೆಯ ಆರೋಪ, ಇವೆಲ್ಲವೂ ಅಸತ್ಯದ ಮುಖಗಳು. ಹೆಣ್ಣಿನ ಸುಂದರ ಸ್ವರೂಪವನ್ನು ತುಳಿಯಲೆತ್ನಿಸುವ ಧರ್ಮವು ತನಗೆ ತಾನೇ ನಾಶವಾಗುತ್ತದೆ."

 ಭಹುಶಹ ಈ ವಿಷಯದ ಬಗ್ಗೆ ಇದಕ್ಕಿಂತಲೂ ಅರ್ಥಪೂರ್ಣವಾಗಿ ಬರೆಯಲು ಯಾರ ಕಯ್ಯಿಂದಲೂ ಕಷ್ಟವಾದೀತು.
ನಮ್ಮಲ್ಲಿರುವ ದ್ಹೌರ್ಬಲ್ಯಗಳನೆಲ್ಲಾ ಸರಿದೂಗಿಸಿ ಹೊಸ ಕಲ್ಪನೆಗಲೊಡನೆ, ಹೊಸ ಕನಸಿನೊಂದಿಗೆ ಮತ್ತೆ ಹೊಸ ಸಮಾಜವೊಂದನ್ನು ಮುಂದಿನ ಪೀಳಿಗೆಗೆ ಕಟ್ಟೋಣವೆಂದು ಕೋರುತ್ತಾ ನನ್ನ ಮಾತನ್ನು ಮುಗಿಸುತ್ತೇನೆ...

ಗುರುವಾರ, ಫೆಬ್ರವರಿ 4, 2010

ಮಾಯಾಮೃಗದ ಬೆನ್ನೇರಿ ಹೊರಟವನ ಕಥೆ..:(

  ಓಡಿಸುತಿದ್ದ ಸೈಕಲ್ ಫಕ್ಕನೆ ಹಿಡಿತ ಕಳಕೊಂಡಿತು, ಏನಾಯಿತೆಂದು ನೋಡಿದರೆ ಹಿಂದಗಡೆ ಅವನು ಸೈಕಲ್ ಮೇಲೆ ಎಗರಿ ಕುಳಿತಿದ್ದ! "ಬೇಗ ಓಡಿಸು ಕಿರಣ್"
"ಯಾಕೋ?"
"ಬೇಗ ಓಡಿಸು"
"ಅದೇ ಯಾಕೆ?"
''ಅವರು ಅಟ್ಟಿಸಿಕೊಂಡು ಬರುತಿದ್ದಾರೆ"
"ಯಾರು?"
"ಅಂಗಡಿಯವರು"
"ಯಾಕೆ?"
"ನನ್ನ ಹಿಡಿಯೋಕೆ"
"ಏನಾಯಿತು?"
"ಅವರ ಅಂಗಡಿಯ ಗಣೇಶ ಎತ್ತಿಕೊಂಡು ಬಂದಿದ್ದೀನಿ"
ಅಷ್ಟರಲ್ಲಿ ಅವರು ನಮಗಿಂತ ಕೇವಲ ೫ ಅಡಿ ಹಿಂದೆ ಇದ್ದರು, ಅದನ್ನು ಕಂಡು ಅವನು ಕೆಳಗೆ ಇಳಿದು ಓಡಿ ಬಿಟ್ಟನು..!
ಅವರು ಕೇಳಿದರು " ಅವನ ಹೆಸರೇನು?"
"v ನ" (ಹೆಸರು ಬದಲಾಯಿಸಿದೆ)
"ಸರಿ ನಿಮ್ಮ principal ಜೊತೆ ಮಾತಾಡ್ತೀನಿ, ನೀನು ಹೋಗು.."
ಅದು teachers day ಗೆ ಅಂತ ನಾವು ಕ್ಲಾಸಿನವರೆಲ್ಲ shopping ಮಾಡೋದಕ್ಕೆ ಹೋಗಿದ್ದೆವು, ಎಲ್ಲಾ ಮುಗಿಸಿ ಹಿಂತಿರುಗುತಿದ್ದಾಗ ಆದ ಘಟನೆ.
ಅವನು ಇರುತ್ತಿದುದೇ ಹಾಗೆ, ಯಾವಾಗ, ಯಾರ ಜೊತೆ ಹೇಗೆ ವರ್ತಿಸುತ್ತನೆಂದು ಊಹಿಸುವುದು ಕಷ್ಟವಾಗಿತ್ತು.
ಅವನ ಮನೆ ನಮ್ಮ ಶಾಲೆಗೆ ತುಂಬಾ ಹತ್ತಿರವಿತ್ತು, ಮತ್ತೆ ಅವನ ತಂದೆ ಪೋಲಿಸ್ ಆಗಿದ್ದರು.
ಅವನು ನಮ್ಮ ಶಾಲೆಗೆ ಬಂದು ಸೇರಿದ್ದು ನಾನು 3 ನೆ ಕ್ಲಾಸಿನಲ್ಲಿದ್ದಾಗ, ಉದ್ದಕ್ಕೆ ಎತ್ತರವಾಗಿದ್ದ ಅವನು ಕಪ್ಪಗಿದ್ದನು.
ಬಂದ ಮೊದಲ ದಿನವೇ class ಗೆ ನುಗ್ಗಿದ ಅವನಷ್ಟೇ ದಪ್ಪಗಿದ್ದ ಒಂದು ಕರಿ ಹೆಗ್ಗಣವನ್ನು ಕೇವಲ ಒಂದು ಆಟದ ಸಾಮಾನಿನಂತೆ ಅದರ ಬಾಲವನ್ನು ಹಿಡಿದೆತ್ತಿ ಆಚೆ ಬಿಸಾಕಿದ್ದ, ಮತ್ತು ನಮ್ಮೆಲ್ಲರ ಪಾಲಿಗೆ hero ಆಗಿಬಿಟ್ಟಿದ್ದ.
ಹೀಗೆ ಬಂದು ನಮ್ಮ ಗುಂಪಿಗೆ ಸೇರಿದ ಅವನು ನಮ್ಮ ಶಾಲೆಯಲ್ಲಿ ಇದ್ದಷ್ಟು ದಿನವೂ ಒಂದಿಲ್ಲೊಂದು ಗಲಾಟೆ ಮಾಡಿ ದೊಂಬಿ ಎಬ್ಬಿಸುತ್ತಿದ್ದ. ನಮ್ಮ ಕ್ಲಾಸ್ ನ ಕಿಟಕಿಗೆ ಎದುರಾಗಿ ಒಂದು carpenter ಅಂಗಡಿ ಇತ್ತು, ಇವನು ಆ ಅಂಗಡಿಯವನನ್ನು ಪರಿಚಯಿಸಿಕೊಂಡು ಅವನ ಬಳಿಯಿದ್ದ music system ನ ಸೌಂಡು ಜಾಸ್ತಿ ಮಾಡುವಂತೆ ಪುಸಲಾಯಿಸಿದ್ದ! ಸರಿ ನಮ್ಮ ಕ್ಲಾಸ್ ನ ಹುಡುಗರೆಲ್ಲ ಪಾಟವನ್ನು ಕೇಳುವುದು ಬಿಟ್ಟು ಎಲ್ಲರೂ ಕಿಟಕಿಗೆ ಕಿವಿಯೊಡ್ಡಿದರು. ಇದು ಹೇಗೋ ನಮ್ಮ ಪ್ರಿನ್ಸಿಯ ಕಿವಿಗೆ ಬಿದ್ದು ಅವನ  ಅಪ್ಪನನ್ನು ಕರೆದು ಒಂದು ದೊಡ್ಡ ಹಗರಣ ಮಾಡಿದರು....
ಅವನು ನಮ್ಮ ಕ್ಲಾಸ್ ನ ಹುಡುಗಿಯರನ್ನು ಹೆದರಿಸಲು ಜೇಬಿನಲ್ಲಿ ಜಿರಳೆಗಳನ್ನು ಹಿಡಿದು ತರುತಿದ್ದ!
ಶಾಲೆಯ ಅಟ್ಟದ ಮೇಲೆ ಕೂರುತಿದ್ದ ಪಾರಿವಾಳಗಳನ್ನು ಕಿಟಕಿಯ ಮೇಲೆ ಹತ್ತಿ ಹಿಡಿಯಲು ಪ್ರಯತ್ನಿಸಿ ನಮ್ಮನ್ನು ಚಕಿತಗೊಳಿಸುತ್ತಿದ್ದ.
ಒಂದು ಸಲ ದೀಪಾವಳಿಯ ಸಂದರ್ಭದಲ್ಲಿ ಊದುಭತ್ತಿಗೆ ಪಟಾಕಿ ಸಿಕ್ಕಿಸಿ ಕ್ಲಾಸ್ ನ tube light ಒಡೆದು ಹಾಕಿದ್ದ!!
ಮನೆಯಲ್ಲಿ ಕೋಳಿಗಳನ್ನು, ಪಾರಿವಾಳಗಳನ್ನು, ನಾಯಿಗಳನ್ನು ಸಾಕಿಕೊಂಡಿದ್ದ, ಮತ್ತು ನಮ್ಮೆಲ್ಲರನ್ನೂ ಕರೆದುಕೊಂಡು ಹೋಗಿ ಅವುಗಳನ್ನು ಪರಿಚಯಿಸಿ(!) ಅವುಗಳ ಜಾತಿ ವಿಶೇಷತೆಗಳ ಬಗ್ಗೆ ಕೊರೆಯುತ್ತಿದ್ದ.
ತನಗೆ ಗೊತ್ತಿದ್ದ ಭೂಗತ ಜಗತ್ತಿನವರ ಕಥೆಗಳನ್ನು ರಸವತ್ತಾಗಿ ನಮಗೆ ವಿವರಿಸುತ್ತಿದ್ದ. ಅಲ್ಲಿ ಆ ನಿಷಿದ್ದ, ಕತ್ತಲ, ಮೋಸದ ಜಗತ್ತಿನಲ್ಲಿ ತುಂಬಾ ದುಡ್ಡಿದೆ ಅನ್ನುತ್ತಿದ.
ಆದರೆ ಅವನ ಈ ರೀತಿಯ ಚಟುವಟಿಕೆಗಳು ಇಷ್ಟಕ್ಕೇ ಸೀಮಿತವಾಗಿರದೆ ಆ ಜಗತ್ತಿಗೂ ಕೈ ಹಾಕಿದ್ದ.
ದುಡ್ಡನ್ನು ಬಡ್ಡಿಗೆ ಬಿಟ್ಟಿದ್ದ.
ಕತ್ತಲ  ಜಗತ್ತಿನೊಳಗೆ  ಹಿಂದಿರುಗಲಾರದಷ್ಟು ದೂರ ಸಾಗಿದ್ದ.
ಒಂದು ದಿನ ಬೆಳಗ್ಗೆ ನನ್ನ ಅಮ್ಮ ನನಗೆ ದಿನ ಪತ್ರಿಕೆ ತೋರಿಸಿದರು-ಅವನು ಕೊಲೆಯಾಗಿ ಹೋಗಿದ್ದ!
ಎತ್ತರಕ್ಕೆ ಉತ್ತಮವಾಗಿ ದೇಹವನ್ನು build ಮಾಡಿಕೊಂಡು ಚಿರತೆಯಷ್ಟು ಚುರುಕಾಗಿದ್ದವನನ್ನು ನಾಲ್ಕಾರು ಜನ ಸಿನಿಮಾ ಶೈಲಿಯಲ್ಲಿ ಅಟ್ಟಿಸಿಕೊಂಡು ಹೋಗಿ ಕಣ್ಣಿಗೆ ಕಾರದ ಪುಡಿ ಎರಚಿ ಹೊಡೆದಿದ್ದರು.
ನನಗೆ ಅವನು ಕಡೆಯ ಬಾರಿ ಸಿಕ್ಕಿದ್ದಾಗ ಹೀಗೆ ಕೇಳಿದ್ದ-
" ನೀವು ಬ್ರಾಹ್ಮಣರು ಯಾಕೆ ಪ್ರಾಣಿಗಳನ್ನು ತಿನ್ನಲ್ಲ? ಹಿಂಸೆ ಅಂತಾನ? ಆದರೆ ಗಿಡ ಮರಗಳಿಗೂ ಜೀವ ಇರುತ್ತದಲ್ಲ, ಅವುಗಳನ್ನು ಮಾತ್ರ ಹೇಗೆ ತಿನ್ತೀರಾ? ಅವಕ್ಕೆ ಹಿಂಸೆ ಆಗಲ್ವಾ?"
ಅವನಿಗೆ ಉತ್ತರ ನೀಡಲು ಹೀಗೆ ಸಿದ್ದಪದಿಸಿಕೊಂಡಿದ್ದೆ-"ಜಗತ್ತಿನಲ್ಲಿ ಎಲ್ಲಾ ಸಸ್ಯಹಾರಿಗಳೂ ಮಾಮ್ಸಹಾರಿಗಳಾದರೆ ಅಥವಾ ಎಲ್ಲಾ ಮಾಮ್ಸಹಾರಿಗಳೂ ಸಸ್ಯಹಾರಿಗಳಾದರೆ ನೈಸರ್ಗಿಕ ಆಹಾರ ಕ್ರಮದಲ್ಲಿ ಅಸಮತೋಲನವಾಗುತ್ತದೆ. ಅದು ಸಾಧ್ಯವಿಲ್ಲ. ಜಗತ್ತಿನ ಪ್ರಾಕೃತಿಕ ನಿಯಮಗಳನ್ನು ಮುರಿಯಬಾರದು. ಎಲ್ಲರೂ ತಮಗಿಷ್ಟ ಬಂದಂತೆ, ತಮಗಿಷ್ಟ  ಬಂದಿದ್ದನ್ನು ತಮಗಿಷ್ಟವಾದ ಹಾಗೆ ತಿನ್ನುತ್ತಿರಬೇಕು, ತಮ್ಮಿಷ್ಟದ ಪ್ರಕಾರ ಬದುಕನ್ನು ಕಟ್ಟಿಕೊಳ್ಳಲು ಪ್ರಯತ್ನಿಸಬೇಕು".
ಆದರೆ ಕೇಳಿಸಿಕೊಳ್ಳಲು ಅವನೇ ಇಲ್ಲಾ...

ಬುಧವಾರ, ಜನವರಿ 6, 2010

"ನಾಳೆಯಿಂದ cricket ಆಡೋದು ಬೇಡ..!"

"ನಾಳೆಯಿಂದ cricket ಆಡೋದು ಬೇಡ..!"
ಹೀಗಂತ ಸಾವಿರ ಸರಿ ಅಂದುಕೊಂಡಿದ್ದೀವಿ, ಮತ್ತು ಅಷ್ಟು ಸಾರಿಯೂ ಯಶಸ್ವಿಯಾಗಿ ಆ ಮಾತನ್ನು ಮುರಿದಿದ್ದೀವಿ....
cricket ಒಂದು ಸಂಭ್ರಮ....ನಮ್ಮ ದ್ಯನಂದಿನ ಚಟುವಟಿಕೆಗಳಲ್ಲಿ ಒಂದಾಗಿಬಿಟ್ಟಿತ್ತು....
ಯಾಕೆಂದರೆ ಅದನ್ನು ಯಾರು ಬೇಕಾದರೂ, ಯಾರ ಜೊತೆ ಬೇಕಾದರೂ, ಯಾವಾಗ ಬೇಕಾದರೂ, ಎಲ್ಲಿ ಬೇಕಾದರೂ, ಹೇಗೆ ಬೇಕಾದರೂ ಆಡಬಹುದಿತ್ತು....ಅಥವಾ ನಾವು ಹಾಗಂದುಕೊಂಡಿದ್ದೆವು...(ಈಗಲೂ..!)

ಪುಸ್ತಕಗಳಲ್ಲಿ ಆಡುತಿದ್ದ book ಕ್ರಿಕೆಟ್, ಕ್ಲಾಸಲ್ಲಿ ಬೆಂಚುಗಳನ್ನು ಸರಿಸಿ ಜಾಗ ಮಾಡಿಕೊಂಡು ಆಡುತಿದ್ದ short wicket, ನಮ್ಮ ಮನೆಯ ರೂಮಿನಲ್ಲಿ, ಮನೆ ಮುಂದಿನ ಕಾರಿಡಾರ್ ನಲ್ಲಿ, ಮನೆ ಮೇಲಿನ terrace ನಲ್ಲಿ, ಮನೆ ಕೆಳಗಿನ ಶೆಡ್ ನಲ್ಲಿ, ಮನೆ ಮುಂದಿನ ರಸ್ತೆಯಲ್ಲಿ, ಪಕ್ಕದ ರಸ್ತೆಯಲ್ಲಿ, ದೊಡ್ಡ ಮೋರಿಯನ್ನು ಮುಚ್ಚಿದ್ದ bridge ಮೇಲೆ, ಚೆನ್ನಮ್ಮನಕೆರೆ, APS, ಕೃಷ್ಣ ರಾವ್ ಪಾರ್ಕ್.....ಹೀಗೆ ಇಡೀ ಜಗತ್ತನ್ನೇ ನಮ್ಮ ಕ್ರಿಕೆಟ್ ಮೈದಾನ ಮಾಡಿಕೊಂಡಿದ್ದೆವು....
ಹೇಳುವವರಿರಲಿಲ್ಲ, ಕೇಳುವವರಿರಲಿಲ್ಲ,  ಅಥವಾ ಅವರು ಹೇಳುತಿದ್ದರೂ ನಾವುಗಳು ಕೇಳುತ್ತಿರಲಿಲ್ಲ....!!

ಹೀಗಿದ್ದ ನಮ್ಮನ್ನು ಮನೆಯಲ್ಲಿ ಕೂಡಿ ಹಾಕುತ್ತಿದ್ದ ಒಂದೇ ಒಂದು ಸಂಗತಿಯೆಂದರೆ....ಮತ್ತದೇ ಕ್ರಿಕೆಟ್ಟು...!! ಭಾರತದ ಯಾವುದಾದರೊಂದು ಮ್ಯಾಚ್ ಇದ್ದರೆ ಸಾಕು ನಮ್ಮ team ನ ಎಲ್ಲರು ಯಾರಾದರೊಬ್ಬರ ಮನೆಯಲ್ಲಿ tent ಹಾಕುತಿದ್ದೆವು...ಯಾವುದೇ ವಿಮರ್ಶಕನಿಗೂ ಕಮ್ಮಿ ಇಲ್ಲದಂತೆ ಪ್ರತಿಯೊಂದು ಎಸತವನ್ನೂ ವಿಮರ್ಶೆ ಮಾಡುತ್ತಿದ್ದೆವು..., ದೀಪಾವಳಿಗೆ ತಂದಿದ್ದ ಪಟಾಕಿಯನ್ನು ಭಾರತ ಗೆಲ್ಲುವ
ಮ್ಯಾಚ್ ಗಳಿಗಾಗಿ ಎತ್ತಿಡುತ್ತಿದ್ದೆವು...ಆ ಮಟ್ಟಗಿನ  ಆಶಾಭಾವನೆಯನ್ನಾದರೂ ನಮ್ಮ ಮೇಲೆ ಕ್ರಿಕೆಟ್ ಬೀರಿತ್ತು...
ಆದರೆ ನಮ್ಮ ಕ್ರಿಕೆಟ್ ಹುಚ್ಚು ಇಷ್ಟಕ್ಕೇ ಸೀಮಿತವಾಗಿದ್ದರೆ ಚೆನ್ನಾಗಿರ್ತಿತ್ತು....ಯಾಕೆಂದರೆ ನಾವು ಎಷ್ಟೋ ಬಾರಿ ಅದನ್ನು ಅತಿರೇಕಕ್ಕೆ ಎತ್ತಿಕೊಂಡು ಹೋಗುತಿದ್ದೆವು....
ಒಂದು ಸಲ ಮನೆ ಎದುರಿದ್ದ thyagarajnagar police station  ಬೋರ್ಡ್ ಗೆ ಹೊಡೆದಿದ್ದೆವು....ಆದರೆ ಅಷ್ಟರಲ್ಲಾಗಲೇ ಅಲ್ಲಿರುವವರು ನಮಗೆ ಪರಿಚಿತರಾಗಿದ್ದರಿಂದ ನಮಗೆ ಏನು ಮಾಡಲಿಲ್ಲ...

ಮಗು ಮಲಗಿದೆ ಗಲಾಟೆ ಮಾಡಬೇಡಿ ಅಂತ ಎದುರು ಮನೆಯವರು, tution ತಗೊಳಕ್ಕೆ ಡಿಸ್ಟರ್ಬ್ ಆಗುತ್ತೆ ಅಂತ ಇನ್ನೊಬ್ಬರು, ವಯಸ್ಸಗಿರುವವರಿದ್ದಾರೆ ನೀವು ಈ ರೀತಿ ಅನಾಗರಿಕರಂತೆ ಆಡುತ್ತ ಕಿರುಚುತ್ತಿದ್ದರೆ ಅವರು heart attack ಆಗಿ ಹೋಗೇ ಬಿಡುತ್ತಾರೆ ಅಂತ ಮಿಕ್ಕವರು....ಹೀಗೆ ನಮ್ಮ ಸ್ವಾತಂತ್ರ್ಯವನ್ನು ಕಸಿದು ಕೊಳ್ಳುವುದಕ್ಕೆ ಹಲವು "ಹೊಟ್ಟೆ ಕಿಚ್ಚಿನವರು" ವಿಫಲ ಪ್ರಯತ್ನ ಆಗಾಗ ಮಾಡುತಿದ್ದರು....(ಇದರಲ್ಲಿ ನಮ್ಮ ಮನೆಯವರೂ ಇದ್ದರು!)

ಒಂದು ಬಾರಿ ನಮ್ಮ ಸನ್ಮಾನ್ಯ ಆಟಗಾರನೊಬ್ಬ( ಹೆಸರು ಹೇಳುವಂತಿಲ್ಲ!) ಆಗ ತಾನೇ ಪ್ರಚಲಿತಕ್ಕೆ ಬಂದಿದ್ದ reverse sweep ಅನ್ನು ಪ್ರಯೋಗಿಸಿದನು...ಬಾಲು ಸೀದಾ ಎದರು ಮನೆಯ ತೆರೆದ ಕಿಟಕಿಯೊಳಗೆ ಹೋಯಿತು...
ಆ ಮನೆಯವರು ನಮ್ಮನ್ನು ನೋಡುವ ಮುನ್ನ, ಅಥವಾ ಪಕ್ಕದ ಮನೆಯವರು ನೋಡುವ ಮುನ್ನ, ದಾರಿ ಹೋಕರು ನೋಡುವ ಮುನ್ನ, ನಮ್ಮ ಮನೆಯವರು ನೋಡುವ ಮುನ್ನ....ನಾವುಗಳು ಮನೆಗೆ ಓಡಿಬಿಟ್ಟೆವು...(ನಂತರ ನಮಗೆ ತಿಳಿಯಿತು ಬಾಲು ಅವರು ಮಾಡುತ್ತಿದ್ದ ಸಾರಿನಲ್ಲಿ ಬಿದ್ದಿತ್ತು...)
ನಾವಂದಿದ್ದು ಅದೇ ಮಾತು-"ನಾಳೆಯಿಂದ cricket ಆಡೋದು ಬೇಡ!"

ಈಗ ಮೊನ್ನೆ national college ground ನಲ್ಲಿ ಆಡುತ್ತಿದ್ದಾಗ, ಆಡುವ ಹುಮ್ಮಸ್ಸಿನಲ್ಲಿ ನಮ್ಮಣ್ಣ ಇನ್ನೊಬ್ಬನಿಗೆ ಡಿಕ್ಕಿ ಹೊಡೆದನು...ಮೂಗಿನಲ್ಲಿ ರಕ್ತ ಬಂತು...ನಂತರ X-ray ತೆಗೆದಾಗ ಕಂಡಿದ್ದು - ಮೂಗು ಮುರಿದಿತ್ತು...
ಆಗ ನಾವಂದು ಕೊಂಡಿದ್ದು-
"ನಾಳೆಯಿಂದ cricket ಆಡೋದು ಬೇಡ!" (ನಾಡಿದ್ದು ಭಾನುವಾರ ಆಡುತಿದ್ದೀವಿ, ನಮ್ಮಣ್ಣನನ್ನೂ ಸೇರಿಸಿಕೊಂಡು...!)

ಸೋಮವಾರ, ಡಿಸೆಂಬರ್ 28, 2009

ಹೊಸ ವರ್ಷದ ಹೊಸ್ತಿಲಲ್ಲಿ....

ಹೊಸ ವರ್ಷದ ಹೊಸ್ತಿಲಲ್ಲಿ:
ಮೊನ್ನೆ ಕ್ರಿಸ್ಮಸ್, ಇಂದು ವೈಕುಂಟ ಏಕಾದಶಿ , ಮೊಹರಂ ಕೂಡ....ಎರಡು ದಿನ ಕಳೆದರೆ ಹೊಸ ವರುಷ......
ಈ ಮಧ್ಯೆ ಭಾರತವು ಲಂಕಾ ವಿರುದ್ಧ ಕ್ರಿಕೆಟ್ ಸರಣಿಯನ್ನು ಗೆದ್ದಿದೆ....ಸಂಭ್ರಮಿಸಲು  ಅದೆಷ್ಟು ಕಾರಣಗಳು.....

ಸರ್ವರಿಗೂ ಹೊಸ ವರ್ಷದ ಹಾರ್ಧಿಕ,ಹೃದ್ಪೂರ್ವಕ,ಸದ್ಭಾವನೆಯ,ಶುಭಾಶಯಗಳು.....
ಸರ್ವೇ ಜನ ಸುಖಿನೋ ಭವಂತೂ....
ಹೊಸ ವರುಷವು ತಮಗೆಲ್ಲರಿಗೂ ಹೊಸ ಕನಸುಗಳಿಗೆ, ಹೊಸ ಸಾಧ್ಯತೆಗಳಿಗೆ, ಹೊಸ ಹಾದಿಯೆಡೆಗೆ,ಹೊಸ ದೃಷ್ಟಿಕೋನದೆಡೆಗೆ, ಹೊಸ ದಿಗಂತದೆಡೆಗೆ,ಹೊಸ ಗುರಿಯೆಡೆಗೆ,ಹೊಸ ಗುರುವಿನೆಡೆಗೆ(!),ಹೊಸಬರೆಡೆಗೆ,ಹೊಸ ಜಗತ್ತಿನೆಡೆಗೆ ಕರೆದೊಯ್ಯಲಿ ಎಂದು ಹಾರೈಸುತ್ತೇನೆ....

ಈ ವರ್ಷದಲ್ಲಿ ಬರದಿರಲಿ ಪಕ್ಕದ ದೇಶದಿಂದ ಗನ್ನು ಹಿಡಿದ ಹುಡುಗರು,ಆಗದಿರಲಿ ಮತ್ತೆ ಜಲಪ್ರಳಯ,ಬರದಿರಲಿ ಮತ್ತೆ ತ್ಸುನಾಮಿ,ನಮ್ಮ ರಾಜಕಾರಣಿಗಳಿಗೆ ಕಾಡದಿರಲಿ ಮತ್ತೆ "ಬಂಡಾಯದ" ಭೂತ,ಏಳದಿರಲಿ ಮತ್ತೆ ನಮ್ಮ ನಾಡ ಒಡೆಯುವ ಕೂಗು......

ಹೊಸ ವರುಷವು ನಿಮ್ಮೆಲರ ಹಳೆಯ ಕನಸುಗಳ ಈಡೇರುವಿಕೆಗೆ ನೆಪವಾಗಲಿ......
ಮತ್ತು ತನ್ಮೂಲಕ ನಿಮಗೆ ಹೊಸ ಸದಭಿರುಚಿಯ,ಸುಸಂಸ್ಕ್ರುತದ,ಸರಳವಾಗಿರುವ, ಸುಂದರವಾಗಿರುವ,ಸಂಭ್ರಮಿಸಬಹುದಾದ, ಸಾತ್ವಿಕವಾಗಿರುವ,ಸುಮಧುರವಾಗಿರುವ,ಸ್ಪಷ್ಟವಾಗಿರುವ,ಸಿಹಿ ಕನಸುಗಳನ್ನು ಕಾಣಲು ಪ್ರೇರಣೆ ನೀಡಲಿ ಎಂದು ಹಾರೈಸುತ್ತಾ.......
ಇಂತಿ ನಿಮ್ಮ ಪ್ರೀತಿಯ....
ನಾನು!

ಭಾನುವಾರ, ಡಿಸೆಂಬರ್ 27, 2009

nanna bagge...

ಹೆಸರು ಕಿರಣ್....
ಸೂರ್ಯನ ಕಿರಣಗಳಷ್ಟೇ ತೀಕ್ಷ್ಣವ??,ಸರ್ವವ್ಯಾಪಿಯ??ಅವಶ್ಯಕವ?? ಗೊತ್ತಿಲ್ಲ.....! ಆದರೆ ಅದರ ಒಂದು ಗುಣ ನನಗೆ ಬಂದಿದೆ. ಅದು ಕೇವಲ ಹಗಲು ಮಾತ್ರ ಕೆಲಸ ಮಾಡುತ್ತದೆ .....ನಾನೂ ಕೂಡ! ಸ್ವಲ್ಪ ನಿದ್ರೆ ಜಾಸ್ತಿ!
ಹುಟ್ಟಿದ್ದು ಬೀದರ್, ಓದಿದ್ದು ಬೆಂಗಳೂರು...
ಹೆಸರಿನ ಪಕ್ಕದಲ್ಲಿ bcom ಅಂತ ಇದ್ದರೂ,
ನಾನು ತುಂಬಾ ಇಷ್ಟ ಪಟ್ಟು ಓದಿದ್ದು ತೇಜಸ್ವಿ, ಭೈರಪ್ಪ,ರವಿ ಬೆಳಗೆರೆ,ಕುವೆಂಪು...
ನೋಡಿದ್ದು ರಾಜ್ ಕುಮಾರ್,ಶಂಕರ್ನಾಗ್,ಉಪೇಂದ್ರ ....
ಆಡಿದ್ದು crickettu...!!
ಇವೆಲ್ಲವೂ ನನ್ನ ವ್ಯಕ್ತಿತ್ವವನ್ನು ರೋಪಿಸಿದೆಯ....?? ಗೊತ್ತಿಲ್ಲ....ಆದರೆ ನನ್ನ ವ್ಯಕ್ತಿತ್ವವು ಹಾಗೆ ರೂಪಿತವಾಗಿದ್ದರೆ ನನ್ನ ಸದಭಿರುಚಿಯ ಬಗ್ಗೆ ಹೆಮ್ಮೆಯಿಂದ ಬೀಗುತ್ತೇನೆ.....ಹಾಗೆ ರೂಪಿತವಾಗಿಲ್ಲದಿದ್ದರೆ ಯಾರ,ಯಾವುದರ ಹಂಗೂ ಇಲ್ಲದೆ ಅದನ್ನು ಸರ್ವ ಸ್ವತಂತ್ರವಾಗಿ ರೂಪಿಸಿಕೊಂಡೆನೆಂಬ ಭ್ರಮೆಯಲ್ಲಿ ಮತ್ತದೇ ಅಹಂಕಾರದಿಂದ ಭೀಗುತ್ತೇನೆ....
ಸದ್ಯಕ್ಕೆ ಇಷ್ಟು ಸಾಕು......