ಹೆಸರು:
ಕೇಳಿದಳವಳು ನನ್ನ ಸುತ್ತಲು ತಿರುಗುವೆಯಲ್ಲಾ, ನಿನ್ನ ಹೆಸರೇನು?
ಹೇಳಿದೆ-ಅದು ಕಳೆದುಹೋಗಿದೆ, ಅದನ್ನೇ ಹುಡುಕುತ್ತಾ ಬಂದೆನೆಂದು...
ನನ್ನ ಕಡೆ ನೋಡದೆ ಕೇಳಿದಳು-ಎಲ್ಲಿ ಹುಡುಕುವೆಯೆಂದು?
ಹೇಳಿದೆ-ನಿನ್ನಲ್ಲೇ ಎಂದು, ಪ್ರೀತಿಗೆ ಹೆಸರಿನ ಹಂಗಿಲ್ಲವೆಂದು.
ತಕ್ಷಣ ಕೊಟ್ಟಳು ನನಗೊಂದು ಹೆಸರು, ಅವಳು ನನ್ನ ಪ್ರೇಮಿ..
ನನಗಿಟ್ಟ ಹೆಸರು ಚಂದ್ರ, ಅವಳು ನಾ ಸುತ್ತುವ ಭೂಮಿ.
ಅವಳಂದಳು-
ನೀನು ಚಂದ್ರ, ಪ್ರತಿ ರಾತ್ರಿ ಕಪ್ಪು ಆಕಾಶಕ್ಕೆ ದೃಷ್ಟಿ ಬೊಟ್ಟು ಇಡುವ ಪ್ರೇಮಿ..
ನಾ ಪ್ರತಿ ಇರುಳು ನಿನ್ನ ಪ್ರೀತಿಯ ಬೆಳಕಿಂದ ಹೊಳೆಯುವ ಭೂಮಿ.

ಬದುಕು ಸಾಗುತಿತ್ತು, ಹಳಿಯ ಮೇಲೆಯೇ ಸಾಗುವ ರೈಲಿನ ಹಾಗೆ...
ನೀ ಬಂದೆ ದಾರಿಯಲಿ ದಿಕ್ಕು ತಪ್ಪಿಸಲು,
ನಂಬಿಕೆಯ ಕಂಬಿಯನ್ನೇ ಕಿತ್ತೊಗೆಯುವ ಬೂಕಂಪದ ಹಾಗೆ...
ಪ್ರೀತಿಯೆಂದರೆ ಹೀಗೆ-ಮತ್ತೇರಿಸಿ ಸಾಯಿಸುವ ಸೋಮರಸದ ಹಾಗೆ.

ನೀನು ಚಂದ್ರನ ಹಾಗೆ,
ನಕ್ಕಾಗ ಅರ್ಧ ಚಂದ್ರ...
ಪ್ರೇಮ ಉಕ್ಕಿ ಹರಿದಾಗ ಪೂರ್ಣ ಚಂದ್ರ...
ಆದರೆ ಮುನಿಸಿಕೊಂಡರೆ ಮಾತ್ರ
ನನಗೆ ಅಮಾವಾಸ್ಯೆ, ನಿನಗೆ ಗ್ರಹಣ...